ಡೇಡಕಿಂಟ್, ಜೂಲಿಯನ್ ವಿಲ್‍ಹೆಲ್ಮ್ ರಿಚರ್ಡ್
	1831-1916). ಜರ್ಮನಿಯ ಗಣಿತವಿದ.  ಜನನ ಬ್ರನ್ಸ್‍ವಿಕ್‍ನಲ್ಲಿ (6-10-1831) ; ಮರಣ ಅಲ್ಲೇ (12-2-1916).  ಭೌತವಿe್ಞÁನಗಳಲ್ಲಿ ಮೊದಲು ಅಧ್ಯಯನವನ್ನು ಆರಂಭಿಸಿದ ಡೇಡಕಿಂಟನು ಗಣಿತಕ್ಕೆ ಸರಿದು ಗೌಸನ (1777-1855) ನಿರ್ದೇಶನದಲ್ಲಿ ಪಿ.ಎಚ್.ಡಿಯನ್ನು ಪಡೆದ (1852).  ಈತನೇ ಗೌಸನ ಕೊನೆಯ ವಿದ್ಯಾರ್ಥಿ.  ಬೈಜಿಕ ಸಂಖ್ಯಾಶಾಸ್ತ್ರದ  ವಿಕಾಸಕ್ಕೆ ಉನ್ನತ ಮಟ್ಟದ ಕೊಡುಗೆಗಳನ್ನು ನೀಡಿದ 19ನೆಯ ಶತಮಾನದ ವಿದ್ವಾಂಸರ ಪೈಕಿ ಡೇಡಕಿಂಟ್ ಒಬ್ಬ.  ಇವನು ಗಟಿಂಗೆನ್ನಿನಲ್ಲಿ ಓದಿ ಅದೇ ವಿಶ್ವವಿದ್ಯಾಲಯದಲ್ಲಿ  ಪ್ರಧಾನ ಸದಸ್ಯನಾದ (1854).  1858ರಲ್ಲಿ ಜೂರಿಚ್‍ನ ಪಾಲಿಟೆಕ್ನಿಕ್ ಶಾಲೆ ಸೇರಿ ನಾಲ್ಕು ವರ್ಷಗಳ ಬಳಿಕ ಬ್ರನ್ಸ್‍ವಿಕ್‍ಗೆ ತೆರಳಿ ಅಲ್ಲಿ ಪ್ರಾಧ್ಯಾಪಕನಾದ.  ಈತ ದ್ವಿಪದ ಪ್ರಮೇಯದ ಮೇಲೆಯೂ ಮಾಡ್ಯುಲರ್ ಮತ್ತು ಅಬೆಲಿಯನ್ ಉತ್ಪನ್ನಗಳ ಮೇಲೆಯೂ ಹಲವಾರು ಪ್ರಬಂಧಗಳನ್ನು ಬರೆದಿದ್ದಾನೆ 1872ರಲ್ಲಿ ಪ್ರಕಟವಾದ ಈತನ ಉದ್ಗ್ರಂಥವೊಂದರಿಂದ ಇವನ ಹೆಸರು ಚಿರಸ್ಥಾಯಿಯಾಗಿದೆ.  ಈ ಗ್ರಂಥದಲ್ಲಿ ಅಪರಿಮೇಯ ಸಂಖ್ಯೆಗಳನ್ನು ಕುರಿತಾದ ಛೇದದ (ತುಂಡಾಗುವಿಕೆ) ಎಂಬ ಸುಪ್ರಸಿದ್ಧ ಭಾವನೆಯನ್ನು ಡೇಡಕಿಂಟ್ ರೂಪಿಸಿದ್ದಾನೆ.  ಇದಕ್ಕೆ ಆತನ ಹೆಸರೇ ಬಂದಿದೆ (ನೋಡಿ- ಡೇಡಕಿಂಟ್-ಛೇದ).  ಸಂಖ್ಯೆ ಎಂಬ ಪರಿಕಲ್ಪನೆಗೆ ಈತ ನೀಡಿದ ಇನ್ನೊಂದು ಅಮೋಘ ಕೊಡುಗೆ ಎಂದರೆ ಸಂಖ್ಯೆಗಳ ನಿರ್ದೇಶನವನ್ನು ಕುರಿತದ್ದು.  ಇಲ್ಲಿನ ಸಮಸ್ಯೆ ಬೈಜಿಕ ಸಂಖ್ಯಾಕ್ಷೇತ್ರಗಳನ್ನೂ ಬೈಜಿಕ ಪೂಣಾಂಕಗಳನ್ನೂ ಅವುಗಳ ಅವಿಭಾಜ್ಯ ಅಪವರ್ತನಗಳಾಗ ವಿಘಟಿಸುವ ಕ್ರಮವನ್ನೂ ಕುರಿತು ಉಂಟು.  ಇಂಥ ಕೆಲವು ಕ್ಷೇತ್ರಗಳಲ್ಲಿ ಸಂಖ್ಯೆಗಳನ್ನು ಅವಿಭಾಜ್ಯ ಅಪವರ್ತನಗಳಾಗಿ ವಿಭಜಿಸುವ ಕ್ರಮ ಅದ್ವತೀಯವಾಗಿಲ್ಲ.  ಇದು ಇಲ್ಲಿನ ಕಗ್ಗಂಟು.  ಸಾಮಾನ್ಯವಾದ ಲೆಕ್ಕದಲ್ಲಿ ಹೀಗಿಲ್ಲ-ಈ ಕ್ರಮ ಅದ್ವಿತೀಯವಾಗಿದೆ.  ಹೀಗೆ ಬೈಜಿಕ ಸಂಖ್ಯಾ ಕ್ಷೇತ್ರಗಳಲ್ಲಿ ಅತ್ಯಂತ ಅವಶ್ಯವೆನಿಸಿದ ಅದ್ವಿತೀಯವನ್ನು ಒಂದು ನೂತನ ಸಂಶೋಧನೆಯಿಂದ (ಅವನ್ನು ಆದರ್ಶಗಳು ಎಂದು ಕರೆದ) ಅವನು ಸ್ಥಾಪಿಸಿದ.  ಆದರ್ಶ ಅನ್ನುವುದು ಒಂದು ಸಂಖ್ಯೆಯಲ್ಲ, ಅನಂತ ಸಂಖ್ಯೆಗಳ ವರ್ಗ.  ಹೀಗೆ ತನಗೆ ಎದುರಾದ ತೊಂದರೆಗಳನ್ನು ಅವನು ಪುನಃ ಅನಂತದಲ್ಲಿ ಆಶ್ರಯ ಪಡೆದು ಪರಿಹರಿಸಿಕೊಂಡ.  ಸಾರ್ವತ್ರೀಕರಣದತ್ತ ಒಯ್ಯುವಂಥ ಉನ್ನತಮಟ್ಟದ ಅಮೂರ್ತತೆಯಿಂದ ಕೂಡಿರುವುದು ಡೇಡಕಿಂಟನ ಕಾರ್ಯದ ಲಕ್ಷಣ.  ಈಗ ಓರ್ವ ಹಿರಿಯ ತತ್ತ್ವe್ಞÁನಿ ಎಂಬುದಾಗಿಯೂ ಪ್ರಸಿದ್ಧನಾಗಿದ್ದಾನೆ.
(ಬಿ.ಬಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ